ನೇರಳಾತೀತ
From Wikipedia, the free encyclopedia
ನೇರಳಾತೀತ ಕಿರಣಗಳು (UV Ray) ದೃಷ್ಟಿಗೆ ಗೋಚರಿಸುವ ಬೆಳಕಿಗಿಂತ ಹೆಚ್ಚಿನ ಆವರ್ತನವನ್ನು ಹೊಂದಿರುತ್ತವೆ. ಈ ಕಿರಣಗಳ ತರಂಗಾಂತರವು ದೃಶ್ಯ ತರಂಗಗಳಿಗಿಂತ ಕಡಿಮೆಯಿದ್ದು ಕ್ಷ-ಕಿರಣಗಳಿಗಿಂತ ಹೆಚ್ಚಿದ್ದು 400 nm ರಿಂದ 10nm ರ ವ್ಯಾಪ್ತಿಯಲ್ಲಿರುತ್ತದೆ. ಇದರ ಶಕ್ತಿ ೩-೧೨೪ ಎಲೆಕ್ಟ್ರಾನ್ ವೋಲ್ಟ್ಗಳು. ಇವುಗಳ ಆವರ್ತನವು ಮನುಷ್ಯರು ನೇರಳೆ ಎಂದು ಗುರುತಿಸುವ ತರಂಗಗಳಿಗಿಂತ ಹೆಚ್ಚಿರುವುದರಿಂದ ಇವುಗಳಿಗೆ ಅತಿನೇರಳೆ ಎಂಬ ಹೆಸರು ಬಂದಿದೆ. ಇವು ಸಾಮಾನ್ಯ ಮನುಷ್ಯರ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಹಲವು ಕೀಟಗಳು ಮತ್ತು ಪಕ್ಷಿಗಳಿಗೆ ಈ ಕಿರಣಗಳನ್ನು ಗ್ರಹಿಸುವ ಶಕ್ತಿಯಿರುತ್ತದೆ. ನೇರಳಾತೀತ ಎಂಬುದು ವಿದ್ಯುತ್ಕಾಂತೀಯ ವಿಕಿರಣದ ಒಂದು ರೂಪವಾಗಿದೆ. ನೇರಳಾತೀತ ಕಿರಣವು ಸೂರ್ಯನ ಬೆಳಕಿನಲ್ಲಿ ಇರುತ್ತದೆ ಮತ್ತು ಸೂರ್ಯನ ಒಟ್ಟು ವಿದ್ಯುತ್ಕಾಂತೀಯ ವಿಕಿರಣದ ಉತ್ಪಾದನೆಯ ಸುಮಾರು 10% ರಷ್ಟಿದೆ. ಇದು ವಿದ್ಯುತ್ ಚಾಪಗಳಿಂದ, ಚೆರೆಂಕೋವ್ ವಿಕಿರಣ; ಮತ್ತು ವಿಶೇಷ ದೀಪಗಳಿಂದ ಕೂಡ ಉತ್ಪತ್ತಿಯಾಗುತ್ತದೆ.
ದೀರ್ಘ-ತರಂಗಾಂತರದ ನೇರಳಾತೀತವನ್ನು ಅಯಾನೀಕರಿಸುವ ಕಿರಣವೆಂದು ಪರಿಗಣಿಸಲಾಗುವುದಿಲ್ಲ, ಏಕೆಂದರೆ ಅದರ ಫೋಟಾನ್ಗಳು ಪರಮಾಣುಗಳನ್ನು ಅಯಾನೀಕರಿಸುವ ಶಕ್ತಿಯನ್ನು ಹೊಂದಿರುವುದಿಲ್ಲ, ಇದು ರಾಸಾಯನಿಕ ಕ್ರಿಯೆಗಳನ್ನು ಉಂಟುಮಾಡಬಹುದು ಮತ್ತು ಅನೇಕ ಪದಾರ್ಥಗಳ ಹೊಳಪು ಅಥವಾ ಪ್ರತಿದೀಪ್ತಿಗೆ ಕಾರಣವಾಗಬಹುದು. ರಾಸಾಯನಿಕ ಮತ್ತು ಜೈವಿಕ ಪರಿಣಾಮಗಳನ್ನು ಒಳಗೊಂಡಂತೆ ಅನೇಕ ಪ್ರಾಯೋಗಿಕ ಅನ್ವಯಿಕೆಗಳನ್ನು, ನೇರಳಾತೀತ ಕಿರಣವು ಸಾವಯವ ಅಣುಗಳೊಂದಿಗೆ ಸಂವಹನ ನಡೆಸುವ ವಿಧಾನದಿಂದ ಪಡೆಯಲಾಗಿದೆ. ಈ ಪರಸ್ಪರ ಕ್ರಿಯೆಗಳು ಅಣುಗಳಲ್ಲಿ ಶಕ್ತಿಯ ಸ್ಥಿತಿಗಳ ಹೀರಿಕೆ ಅಥವಾ ಸರಿಹೊಂದಿಕೆಯನ್ನು ಒಳಗೊಂಡಿರುತ್ತದೆ, ಆದರೆ ಅಗತ್ಯವಾಗಿ ತಾಪನವನ್ನು ಒಳಗೊಳ್ಳುವುದಿಲ್ಲ.
ಸೂರ್ಯನ ವರ್ಣಪಟಲದಲ್ಲಿ ಇವುಗಳ ಇರುವಿಕೆಯನ್ನು ಗುರುತಿಸಲಾಗಿದೆ. ವಿದ್ಯುಚ್ಚಾಪಗಳು, ಪಾದರಸ ದೀಪಗಳು ಹಾಗೂ ಅತಿನೇರಳೆ ದೀಪಗಳು ಅತಿನೇರಳೆ ಕಿರಣಗಳನ್ನು ಹೊರಸೂಸುತ್ತವೆ. ಈ ವಿಕಿರಣಗಳನ್ನು ಹಲವಾರು ರಾಸಾಯನಿಕ ಕ್ರಿಯೆಗಳಲ್ಲಿ ಬಳಸಿಕೊಳ್ಳುತ್ತಾರೆ. ಇವು ಕೆಲವು ವಸ್ತುಗಳನ್ನು ಬೆಳಗುವಂತೆ ಮಾಡುತ್ತವೆ. ಸೂರ್ಯನಿಂದ ಭೂಮಿಯನ್ನು ತಲುಪುವ ಹೆಚ್ಚಿನ ಅತಿನೇರಳೆ ಕಿರಣಗಳು ಅಯಾನೀಕರಣ ಮಾಡದಂತಹ ಕಿರಣಗಳು. ಅಯಾನೀಕರಣ ಮಾಡುವ ಕಿರಣಗಳು 120 nm ರಿಂದ 10 nm ರವರೆಗೆ ತರಂಗಾಂತರವನ್ನು ಹೊಂದಿದ್ದು ಉತ್ಕಟ ಅತಿನೇರಳೆ ಕಿರಣಗಳೆಂದು ಕರೆಯಲ್ಪಡುತ್ತವೆ. ಈ ರೀತಿಯ ಕಿರಣಗಳು ಭೂಮಿಯ ವಾತಾವರಣದ ಮೂಲಕ ಹಾದುಹೋಗುವಾಗ ಸಾರಜನಕ ಮತ್ತು ಆಮ್ಲಜನಕದಿಂದ ಹೀರಿಕೊಳ್ಳಲ್ಪಡುತ್ತವೆ. ಆದ್ದರಿಂದ ಇವು ಭೂಮಿಯನ್ನು ತಲುಪುವ ಸಾಧ್ಯತೆ ಕಡಿಮೆ.
ಕಿರು-ತರಂಗ ನೇರಳಾತೀತ ಬೆಳಕು ಡಿಎನ್ಎಗೆ ಹಾನಿ ಮಾಡುತ್ತದೆ ಮತ್ತು ಅದು ಸಂಪರ್ಕಕ್ಕೆ ಬರುವ ಮೇಲ್ಮೈಗಳನ್ನು ಕ್ರಿಮಿನಾಶಗೊಳಿಸುತ್ತದೆ. ಮಾನವರಿಗೆ, ಚರ್ಮವನ್ನು ನೇರಳಾತೀತ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಬಿಸಿಲುಗಂದಿನ ಜೊತೆಗೆ ಚರ್ಮದ ಕ್ಯಾನ್ಸರ್ನ ಅಪಾಯವಿದೆ.[1] ಆದಾಗ್ಯೂ, ನೇರಳಾತೀತ ಬೆಳಕು ಹೆಚ್ಚಿನ ಭೂ ಕಶೇರುಕಗಳಲ್ಲಿ ವಿಟಮಿನ್ ಡಿ ರಚನೆಗೆ ಕಾರಣವಾಗಿದೆ.[2]
ಮಾನವ ದೃಷ್ಟಿಯ ತರಂಗಾಂತರದ ಮಿತಿಯನ್ನು 400 nm ಎಂದು ತೆಗೆದುಕೊಳ್ಳಲಾಗುತ್ತದೆ. ಆದ್ದರಿಂದ ನೇರಳಾತೀತ ಕಿರಣಗಳು ಮಾನವರಿಗೆ ಅಗೋಚರವಾಗಿರುತ್ತವೆ, ಆದರೂ ಜನರು ಕೆಲವೊಮ್ಮೆ ಇದಕ್ಕಿಂತ ಕಡಿಮೆ ತರಂಗಾಂತರದ ಬೆಳಕನ್ನು ಗ್ರಹಿಸಬಹುದು.[3] ಕೀಟಗಳು, ಪಕ್ಷಿಗಳು ಮತ್ತು ಕೆಲವು ಸಸ್ತನಿಗಳು ಸಮೀಪ-ನೇರಳಾತೀತವನ್ನು ನೋಡಬಹುದು.[4]