ದ್ರಾವಿಡ ಭಾಷೆಗಳು
From Wikipedia, the free encyclopedia
ದ್ರಾವಿಡ ಭಾಷೆಗಳು ಭಾರತೀಯ ಉಪಖಂಡದ ಒಂದು ಭಾಷಾ ಕುಟುಂಬವಾಗಿದೆ. ದ್ರಾವಿಡ ಭಾಷೆಗಳು ದಕ್ಷಿಣ ಭಾರತ, ಮಧ್ಯ ಭಾರತ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಪ್ರಾಂತ್ಯಗಳಲ್ಲಿ ಬಳಕೆಯಲ್ಲಿವೆ. ದ್ರಾವಿಡ ಭಾಷೆಗಳು ಯಾವುದೇ ಬೇರೆಯ ಭಾಷಾಕುಟುಂಬಕ್ಕೆ ಸೇರಿದೆಯೇ ಎಂದು ತಿಳಿದುಕೊಳ್ಳಲು ಬಹಳ ಸಂಶೋಧನೆಗಳು ನಡೆದಿವೆಯಾದರೂ, ಖಚಿತವಾದ ಸಂಬಂಧವು ಈವರೆಗೂ ದೊರೆತಿಲ್ಲ. ಹೀಗಾಗಿ ಇದನ್ನು ಒಂದು ಸ್ವತಂತ್ರ ಭಾಷಾ ಕುಟುಂಬವೆಂದೇ ಪರಿಗಣಿಸಲಾಗಿದೆ.
ದ್ರಾವಿಡ ಭಾಷೆಗಳು | |
---|---|
ಭೌಗೋಳಿಕ ವ್ಯಾಪಕತೆ: |
ದಕ್ಷಿಣ ಏಷ್ಯಾ |
ವಂಶವೃಕ್ಷ ಸ್ಥಾನ: | ಪ್ರಪಂಚದ ಪ್ರಮುಖ ಭಾಷಾ ಕುಟುಂಬಗಳಲ್ಲಿ ಒಂದು |
ವಿಭಾಗಗಳು: |
|
ದ್ರಾವಿಡ ಭಾಷೆಗಳ ಮೂಲ ಭಾಷೆಯಾದ ಪೂರ್ವ ದ್ರಾವಿಡಭಾಷೆಯು ಇತಿಹಾಸ ಪೂರ್ವಕಾಲದಲ್ಲಿ, ಅನೇಕ ವರ್ಷಗಳ ಹಿಂದೆಯೇ ಭಾರತದಲ್ಲೇ ಜನಿಸಿತು ಎಂದು ಹೇಳಲಾಗುತ್ತದೆ.ದ್ರಾವಿಡಭಾಷೆಗಳಿಗೆ ಕೆಲವು ಸಾಮಾನ್ಯ ಲಕ್ಷಣಗಳಿದ್ದು ಜಗತ್ತಿನ ಬೇರೆ ಯಾವುದೇ ಭಾಷಾವಂಶದ ಜೊತೆ ಸಂಬಂಧವಿರುವಂತೆ ತೋರುವುದಿಲ್ಲ.
ದ್ರಾವಿಡ ಭಾಷಾ ವರ್ಗವು ಸುಮಾರು ೮೫ ಭಾಷೆಗಳನ್ನು ಒಳಗೊಂಡಿದ್ದು ಸುಮಾರು ೨೧೭ ದಶಲಕ್ಷ ಜನರು ಮಾತನಾಡುತ್ತಾರೆ. ಇವು ದಕ್ಷಿಣ ಭಾರತದಲ್ಲಿ ಮತ್ತು ಪೂರ್ವ ಮತ್ತು ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಮತ್ತು ಈಶಾನ್ಯ ಶ್ರೀಲಂಕ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಇರಾನ್, ಮಲೇಷಿಯಾ, ಸಿಂಗಪುರಗಳಲ್ಲಿ ಬಳಕೆಯಲ್ಲಿವೆ.