ಜಲಶುದ್ಧೀಕರಣ
From Wikipedia, the free encyclopedia
ಜಲಶುದ್ಧೀಕರಣ ವೆಂಬುದು, ಮೂಲ ಸ್ಥಿತಿಯ ನೀರಿನಲ್ಲಿರುವ ಬೇಡವಾದ ರಾಸಾಯನಿಕಗಳನ್ನು, ವಸ್ತುಗಳನ್ನು ಮತ್ತು ಜೈವಿಕ ಕಶ್ಮಲಗಳನ್ನು ತೆಗೆಯುವ ಕ್ರಿಯೆಯಾಗಿದೆ. ನಿರ್ದಿಷ್ಟ ಉದ್ದೇಶಕ್ಕೆ ಹೊಂದಿಕೊಳ್ಳುವ ನೀರನ್ನು ಉತ್ಪಾದಿಸುವುದು ಇದರ ಗುರಿಯಾಗಿದೆ. ಮಾನವರ ಬಳಕೆಗಾಗಿ ಬಹುಪಾಲು ನೀರನ್ನು ಶುದ್ಧೀಕರಿಸಲಾಗುತ್ತದೆ (ಕುಡಿಯುವ ನೀರು), ಆದರೆ ಜಲಶುದ್ಧೀಕರಣವನ್ನು ವೈದ್ಯಕೀಯ, ಔಷಧ ವಿಜ್ಞಾನ, ರಾಸಾಯನಿಕ ಮತ್ತು ಕೈಗಾರಿಕಾ ಬಳಕೆಗಳ ಬೇಡಿಕೆಗಳನ್ನು ಈಡೇರಿಸುವುದು ಒಳಗೊಂಡಂತೆ ವಿವಿಧ ಉದ್ದೇಶಗಳಿಗಾಗಿ ಮಾಡಬಹುದಾಗಿದೆ. ಸಾರ್ವತ್ರಿಕವಾಗಿ ಬಳಸುವ ವಿಧಾನಗಳು ಶೋಧನೆ ಮತ್ತು ಸಂಚಯದಂತಹ ಭೌತಿಕ ಪ್ರಕ್ರಿಯೆಗಳು, ನಿಧಾನವಾಗಿ ಮರಳಿನ ಸೋಸುವಿಕೆ ಅಥವಾ ಕ್ರಿಯಾಶೀಲ ಕೆಸರಿನಂತಹ ಜೈವಿಕ ಕಾರ್ಯವಿಧಾನಗಳು, ಕುಚ್ಚಾಗುವಿಕೆ ಮತ್ತು ಕ್ಲೋರಿನೀಕರಣದಂತಹ ರಾಸಾಯನಿಕ ಕಾರ್ಯವಿಧಾನಗಳು ಹಾಗೂ ನೇರಳಾತೀತ ಬೆಳಕಿನಂತಹ ವಿದ್ಯುತ್ಕಾಂತೀಯ ವಿಕಿರಣಗಳ ಬಳಕೆಯನ್ನು ಒಳಗೊಂಡಿದೆ.
ನೀರಿನ ಶುದ್ಧೀಕರಣ ವಿಧಾನವು, ತೇಲಾಡುತ್ತಿರುವ ಕಣಗಳು, ಪರಾವಲಂಬಿಗಳು, ಬ್ಯಾಕ್ಟೀರಿಯ, ಅಲ್ಗೆ, ವೈರಸ್ ಗಳು, ಶಿಲೀಂಧ್ರವನ್ನು ಒಳಗೊಂಡಂತೆ ಪೃಥಕಣಗಳ ರೂಪದಲ್ಲಿರುವ ವಸ್ತುವಿನ ಸಾಂದ್ರತೆಯನ್ನು ಕಡಿಮೆಮಾಡಬಹುದು; ಅಲ್ಲದೇ ಮಳೆಬಿದ್ದ ನಂತರ ನೀರಿನ ಮೇಲ್ಮೆನಲ್ಲಿರುವ ಪೃಥಕಣರೂಪದ ಮತ್ತು ದ್ರವರೂಪದಲ್ಲಿರುವ ವಸ್ತುಗಳ ಸಾಂದ್ರತೆಯನ್ನು ಕಡಿಮೆ ಮಾಡುತ್ತದೆ.
ಕುಡಿಯುವ ನೀರಿನ ಗುಣಮಟ್ಟವನ್ನು ಸಾಮಾನ್ಯವಾಗಿ ಸರ್ಕಾರ ನಿರ್ಧರಿಸುತ್ತದೆ; ಅಥವಾ ಅಂತರರಾಷ್ಟ್ರೀಯ ಗುಣಮಟ್ಟದ ಮೂಲಕ ನಿರ್ಧರಿಸಲಾಗುತ್ತದೆ. ಈ ಗುಣಮಟ್ಟಗಳು ಸಾಮಾನ್ಯ ಬಳಸುವ ನೀರಿನಲ್ಲಿ ಸಾಮಾನ್ಯವಾಗಿ ಕಲ್ಮಶದ ಕನಿಷ್ಠ ಮತ್ತು ಗರಿಷ್ಠ ಸಾಂದ್ರತೆ ಎಷ್ಟಿರಬೇಕೆಂಬುದನ್ನು ನಿರ್ಧರಿಸುತ್ತವೆ.
ಕೇವಲ ವೀಕ್ಷಣೆಯ ಮೂಲಕ ನೀರು ಸರಿಯಾದ ಗುಣಮಟ್ಟವನ್ನು ಹೊಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಕುದಿಸುವಿಕೆ ಅಥವಾ ಮನೆಯಲ್ಲಿ ಬಳಸುವ ಸಕ್ರಿಯ ಇಂಗಾಲದ ಬಳಕೆಯಂತಹ ಸರಳವಾದ ವಿಧಾನಗಳ ಮೂಲಕ ಬೇರೆಡೆಯಿಂದ ತಂದಂತಹ ನೀರಿನಲ್ಲಿರಬಹುದಾದ ಎಲ್ಲಾ ಕಲ್ಮಶಗಳನ್ನು ಶುದ್ಧೀಕರಿಸಿ ತೆಗೆಯುವುದು ಸಾಧ್ಯವಿಲ್ಲ. ನೈಸರ್ಗಿಕವಾಗಿ ದೊರೆಯುವ ನೀರನ್ನು – 1800ರ ಹೊತ್ತಿನಲ್ಲಿ ಎಲ್ಲಾ ರೀತಿಯ ಪ್ರಾಯೋಗಿಕ ಉದ್ದೇಶಗಳಿಗೆ ಸೂಕ್ತವಾಗಿದೆ ಎಂದು ಪರಿಗಣಿಸಲಾಗುತ್ತಿತ್ತು – ಆದರೂ ಈಗ ಯಾರಾದರೂ ಕುಡಿಯಲು ಬಯಸಿದರೆ ಅವರು ಅದನ್ನು ಕುಡಿಯುವ ಮೊದಲು ಅದು ಏನನ್ನು ಒಳಗೊಂಡಿದೆ ಎಂಬುದನ್ನು ಪರೀಕ್ಷಿಸಬೇಕಾಗಿದೆ. ರಾಸಾಯನಿಕ ವಿಶ್ಲೇಷಣೆ ದುಬಾರಿಯಾದರೂ ಕೂಡ ಶುದ್ಧೀಕರಣದ ಸರಿಯಾದ ವಿಧಾನಗಳ ಮೇಲೆ ನಿರ್ಧರಿಸುವುದಕ್ಕಾಗಿ ಬೇಕಾದ ಮಾಹಿತಿ ಪಡೆಯಲು ಇರುವ ಏಕೈಕ ಮಾರ್ಗವಾಗಿದೆ.
2007 ರ ವಿಶ್ವ ಆರೋಗ್ಯ ಸಂಸ್ಥೆ ಯ ವರದಿಯ ಪ್ರಕಾರ, 1.1 ಬಿಲಿಯನ್ ನಷ್ಟು ಜನರು , ಅಭಿವೃದ್ಧಿ ಪಡಿಸಲಾದ ಕುಡಿಯುವ ನೀರಿನ ಸರಬರಾಜನ್ನು ಪಡೆಯಲಾಗುತ್ತಿಲ್ಲ, ಅತಿಸಾರ ಕಾಯಿಲೆಯ 4 ಬಿಲಿಯನ್ ವಾರ್ಷಿಕ ಪ್ರಕರಣಗಳಲ್ಲಿ 88 ಪ್ರತಿಶತದಷ್ಟು, ಸುರಕ್ಷಿತವಲ್ಲದ ನೀರನ್ನು ಹಾಗೂ ಅಸಮರ್ಪಕ ನೈರ್ಮಲ್ಯ ಮತ್ತು ಸ್ವಚ್ಛತೆಯನ್ನು ಚಿತ್ರಿಸುತ್ತವೆ. ಅಲ್ಲದೇ ಪ್ರತಿವರ್ಷ 1.8 ಮಿಲಿಯನ್ ನಷ್ಟು ಜನರು ಅತಿಸಾರದಿಂದ ಪ್ರಾಣಕಳೆದುಕೊಳ್ಳುತ್ತಾರೆ. ಈ ಅತಿಸಾರದ ಪ್ರಕರಣಗಳಲ್ಲಿ 94 ಪ್ರತಿಶತದಷ್ಟು, ಶುದ್ಧನೀರಿನ ಸರಬರಾಜು ಮಾಡುವಿಕೆಯನ್ನು ಒಳಗೊಂಡಂತೆ ಪರಿಸರದಲ್ಲಿ ಕೆಲವೊಂದು ಬದಲಾವಾಣೆ ತರುವ ಮೂಲಕ ಇದನ್ನು ತಡೆಯಬಹುದಾಗಿದೆ ಎಂದು WHO ಅಂದಾಜುಮಾಡಿದೆ. [1] ಮನೆಯಲ್ಲೆ ನೀರನ್ನು ಶುದ್ಧೀಕರಿಸಲು ಇರುವ ಸುಲಭ ವಿಧಾನಗಳು ಈ ಕೆಳಕಂಡಂತಿವೆ. ಉದಾಹರಣೆಗೆ; ಕ್ಲೋರಿನೀಕರಣ, ಸೋಸುವಿಕೆ,ಮತ್ತು ಸೌರ ಸೋಂಕುನಿವಾರಣೆ, ಹಾಗೂ ಸುರಕ್ಷಿತವಾದ ಧಾರಕದಲ್ಲಿ ಸಂಗ್ರಹಿಸಿಡುವುದರಿಂದ ಪ್ರತಿವರ್ಷ ಹಲವು ಜೀವಗಳನ್ನು ಉಳಿಸಬಹುದಾಗಿದೆ.[2] ಜಲವಾಹಿತ ಕಾಯಿಲೆಗಳಿಂದ ಉಂಟಾಗುವ ಜೀವ ಹಾನಿ ತಪ್ಪಿಸುವುದು ಅಭಿವೃದ್ಧಿಶೀಲ ರಾಷ್ಟ್ರಗಳ ಸಾರ್ವಜನಿಕ ಆರೋಗ್ಯವ್ಯವಸ್ಥೆಯ ಪ್ರಧಾನ ಗುರಿಯಾಗಿದೆ.