ಜನಪದ ವೈದ್ಯ
From Wikipedia, the free encyclopedia
ಯಾವುದನ್ನು ಜನಸಾಮಾನ್ಯರು ಸಾಮಾನ್ಯವಾಗಿ ಹಳ್ಳಿವೈದ್ಯ, ನಾಟಿವೈದ್ಯ ಎಂದು ಕರೆಯುವರೋ ಅದನ್ನೇ ಶಾಸ್ತ್ರೀಯವಾಗಿ ಜನಪದ ವೈದ್ಯ ಎಂದು ಕರೆಯಬಹುದು.[1] ಜಾನಪದದಲ್ಲಿ ಸಾಹಿತ್ಯಕ ಬಗೆ, ಭಾಷಿಕ ಬಗೆ ವೈಜ್ಞಾನಿಕ ಬಗೆ, ಕ್ರಿಯಾತ್ಮಕ ಬಗೆ ಎಂಬ ನಾಲ್ಕು ಬಗೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಜನಪದ ವೈದ್ಯ ವೈಜ್ಞಾನಿಕ ಬಗೆಗೆ ಸೇರುತ್ತದೆ. ಜನಪದರು ಕೆಲಸದ ಆಯಾಸ ನೀಗಿಕೊಳ್ಳಲು ಮತ್ತು ಸಂತೋಷಪಡಲು ಜನಪದ ಸಾಹಿತ್ಯ ಹಾಗೂ ಜನಪದ ಕಲೆಗಳನ್ನು ಸೃಷ್ಟಿಸಿದರು. ದೇವರಿಗೆ ಹೆದರಿ ಸಂಪ್ರದಾಯಗಳನ್ನು ಮತ್ತು ಹಬ್ಬಗಳನ್ನು ಆಚರಿಸಿದರು ; ಹಾಗೆಯೇ ತಮಗೆ ಬಂದ ರೋಗಗಳನ್ನು ಪರಿಹಾರ ಮಾಡಿಕೊಳ್ಳಲು ಜನಪದ ವೈದ್ಯವನ್ನು ಕಂಡುಕೊಂಡರು. ದಿನನಿತ್ಯದ ಜೀವನದಲ್ಲಿ ಜನಪದರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು. ಪ್ರಕೃತಿಯಲ್ಲಿ ದೊರೆಯುವ ಬಗೆಬಗೆಯ ಬೇರುಗಳು, ಎಲೆಗಳು, ಕಾಯಿಗಳು, ಹಣ್ಣುಗಳು, ಪ್ರಾಣಿಜನ್ಯವಾದ ವಸ್ತುಗಳು, ದಿನಬಳಕೆಯ ಸಾಮಾನ್ಯ ವಸ್ತುಗಳು ಎಲ್ಲವನ್ನೂ ಬುದ್ಧಿವಂತಿಕೆಯಿಂದ ಪ್ರಯೋಗಶೀಲತೆಯಿಂದ ಬಳಸಿಕೊಂಡು ರೋಗಗಳನ್ನು ಪರಿಹರಿಸಿಕೊಳ್ಳಲು ಅವರು ಯತ್ನಿಸಿದರು.[2]